ಕಾರ್ನೇಗಿ, ಡೇಲ್

 1885-1955. ಅಮೆರಿಕದ ಜನಪ್ರಿಯ ಲೇಖಕ ಮತ್ತು ಭಾಷಣಕಾರ. ತಂದೆ ಜೇಮ್ಸ್ ವಿಲಿಯಂ ಕಾರ್ನೇಗಿ. ತಾಯಿ ಅಮಂದ ಎಲಿಜûಬೆತ್ (ಹಾರ್ಬಿಸನ್). ಅವರಿಗೆ ಡೇಲ್ ಎರಡನೆಯ ಮಗ. ನದಿಯೊಂದರ ದಂಡೆಯ ಮೇಲೆ ಹೊಲದ ಮನೆಯಲ್ಲಿ ಜೀವಿಸುತ್ತಿದ್ದ ಕಾರ್ನೇಗಿ ಕುಟುಂಬದ ಪೈರೆಲ್ಲ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದುದರಿಂದ ಜೇಮ್ಸ್ ಕಾರ್ನೆಗಿಗೆ ಬಡತನ ತಪ್ಪಲಿಲ್ಲ. ಕೆಲವು ಕಾಲಾನಂತರ ಆತ ಆ ಗ್ರಾಮ ಬಿಟ್ಟು ವಾರೆನ್ಸ್‍ಬರ್ಗ್ ನಗರಕ್ಕೆ ಹೋಗಿ ನೆಲಸಿದ. ಎಲಿಜûಬೆತ್ ಕಾರ್ನೇಗಿ ಮೆಥಾಡಿಸ್ಟ್ ಧರ್ಮಪಂಥದವಳಾದ್ದರಿಂದ ತನ್ನ ಮಕ್ಕಳು-ಕ್ಲಿಫ್ ಮತ್ತು ಡೇಲ್-ಇಬ್ಬರೂ ಪಾದ್ರಿಗಳಾಗಬೇಕೆಂದು ಹಂಬಲಿಸುತ್ತಿದ್ದಳು.

 ಡೇಲ್ ಕಾರ್ನೇಗಿ 1904ರಿಂದ 1908ರ ವರೆಗೆ ವಾರೆನ್ಸ್‍ಬರ್ಗ್ ನಗರದ ಶಿಕ್ಷಕರ ಕಾಲೇಜಿನಲ್ಲಿ ವ್ಯಾಸಂಗ ಮಾಡಿ, ಅಲೆಯನ್ಸ್ ನಗರದ (ನೆಬ್ರಾಸ್ಕ) ಇಂಟರ್ ನ್ಯಾಷನಲ್ ಕರೆಸ್ಪಾಂಡೆನ್ಸ್ ಸ್ಕೂಲ್ ಎಂಬ ಅಂಚೆ ಶಿಕ್ಷಣ ಶಾಲೆಯ ಶಿಕ್ಷಣ ಸಾಹಿತ್ಯದ ಮಾರಾಟಗಾರನಾಗಿ ಕೆಲಸ ಮಾಡಿದ. ತರುವಾಯ ಓಮಾಹೆ ನಗರಕ್ಕೆ ಹೋಗಿ ಆರ್‍ಮೊರ್ ಅಂಡ್ ಕಂಪನಿಯ ಮಾರಾಟಗಾರನಾಗಿ ಸೇರಿದ. 1911ರ ಹೊತ್ತಿಗೆ ಅವನಲ್ಲಿ 500 ಡಾಲರುಗಳಷ್ಟು ಹಣ ಕೂಡಿರಲು, ಭಾಷಣ ಕಲೆಯ ಬಗ್ಗೆ ಶಿಕ್ಷಣ ಪಡೆಯಲು ನಿರ್ಧರಿಸಿ ನ್ಯೂಯಾರ್ಕ್ ಪಟ್ಟಣಕ್ಕೆ ಪ್ರಯಾಣ ಬೆಳೆಸಿದ. ರೈಲಿನಲ್ಲಿ ಪ್ರಯಾಣಿಕನೊಬ್ಬನ ಸಲಹೆಯಲ್ಲಿ ಭರವಸೆ ಇಟ್ಟು ನ್ಯೂಯಾರ್ಕ್ ಪಟ್ಟಣ ಸೇರಿದೊಡನೆಯೇ ಅಮೆರಿಕನ್ ಅಕೆಡಮಿ ಆಫ್ ಡ್ರಮೆಟಿಕ್ ಆಟ್ರ್ಸ್ ಎಂಬ ಅಭಿನಯ ಶಿಕ್ಷಣಶಾಲೆಯನ್ನು ಸೇರಿದ. ನಾಟಕರಂಗ ತನ್ನ ಕ್ಷೇತ್ರವಲ್ಲವೆಂದು ಖಾತರಿಯಾದ ಮೇಲೆ ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಶಾಲೆಯನ್ನು ಸೇರಿದ. (1914). ವ್ಯಾಸಂಗ ಕಾಲದಲ್ಲೇ ನ್ಯೂಯಾರ್ಕಿನ ವೈ.ಎಂ.ಸಿ.ಎ. ಸಂಸ್ಥೆಯಲ್ಲಿ ಭಾಷಣಕಲೆಯ ಶಿಕ್ಷಕನಾಗಿ ಕೆಲಸ ಮಾಡಿ, ತರುವಾಯ ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ಪತ್ರಿಕೋದ್ಯಮವನ್ನು ಅಭ್ಯಾಸ ಮಾಡಿದ. ವಲ್ರ್ಡ್ ಔಟ್‍ಲುಕ್, ಅಮೆರಿಕನ್ ಮ್ಯಾಗeóÉೈನ್, ಇಲಸ್ಟ್ರೇಟೆಡ್ ವಲ್ರ್ಡ್ ಪಿಕ್ಟೋರಿಯಲ್ ರೆವ್ಯು, ರೊಟೇರಿಯನ್, ಸ್ಕೊಲಾಸ್ಟಿಕ್, ಮೊದಲಾದ ಅಮೆರಿಕದ ಪತ್ರಿಕೆಗಳಿಗೆ ಬರೆದ. ವೈ. ಎಂ. ಸಿ. ಎ. ಸಂಸ್ಥೆಯಲ್ಲಿ ಪಾಠ ಹೇಳುವುದು, ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವುದು-ಇವುಗಳಿಂದ ಸಂಪಾದನೆ ತಿಂಗಳಿಗೆ 500 ಡಾಲರುಗಳಿಗೆ ಏರಿತು. ಟೈಂಸ್ ಚೌಕದಲ್ಲಿ ತನ್ನ ಅಂಚೆ-ಶಿಕ್ಷಣದ ಕಚೇರಿಯನ್ನು ತೆರೆದು, ಭಾಷಣಕಲೆಯ ಸಂಬಂಧವಾದ ಶಿಕ್ಷಣ ವಿಧಾನಗಳನ್ನು ರೂಪಿಸಿ, ದೇಶದಾದ್ಯಂತ ಹರಡಿದ್ದ ತನ್ನ ಶಿಷ್ಯವರ್ಗಕ್ಕೆ ಶಾಸ್ತ್ರೀಯವಾಗಿ ಪಾಠ ಹೇಳಲು ಲಘು ಗ್ರಂಥಗಳನ್ನು ಬರೆದ.

 1919-20 ಮತ್ತು 1920-21-ಈ ಎರಡು ವರ್ಷ ಕಾಲ ವಿವಿಧ ವಿಷಯಗಳನ್ನು ಕುರಿತು ಭಾಷಣ ಮಾಡುತ್ತ ದೇಶ ಪರ್ಯಟನ ಮಾಡಿ ಬಂದ. 1925ರಲ್ಲಿ ರಾಯಲ್ ಜಿಯೋಗ್ರಾಫಿಕಲ್ ಸೊಸೈಟಿಯ ಸದಸ್ಯನಾಗಿ ನೇಮಕವಾದ. 1921ರಲ್ಲಿ ಫ್ರಾನ್ಸ್ ದೇಶದ ಶ್ರೀಮಂತಳೊಬ್ಬಳನ್ನು ಮದುವೆಯಾದ. ಅವರಿಬ್ಬರೂ ಕೆಲವು ವರ್ಷ ಪ್ರವಾಸ ಮಾಡಿ ಕೊನೆಗೆ ನ್ಯೂಯಾರ್ಕ್ ಬಳಿಯ ಫಾರೆಸ್ಟ್ ಹಿಲ್ಸ್ ಭಾಗದಲ್ಲಿ ನೆಲಸಿದರು.

 ಪ್ರವಾಸಾನಂತರ ಡೇಲ್ ಕಾರ್ನೇಗಿ ತನ್ನ ಶಿಕ್ಷಣಶಾಲೆಯನ್ನು ಮತ್ತೆ ಪ್ರಾರಂಭಿಸಿ ತನ್ನ ಲೇಖನಗಳನ್ನು ಮತ್ತು ಲಘು ಗ್ರಂಥಗಳನ್ನು ಸಂಘಟಿಸಿ ಗ್ರಂಥರೂಫಕ್ಕೆ ತಂದ. ಪ್ರಕಟವಾದ ಇವನ ಗ್ರಂಥಗಳು ಇವು: ಪಬ್ಲಿಕ್ ಸ್ಪೀಕಿಂಗ್, ಎ ಪ್ರ್ಯಾಕ್ಟಿಕಲ್ ಕೋರ್ಸ್ ಫಾರ್ ಬಿಸಿನೆಸ್ ಮೆನ್ (1926), ಪಬ್ಲಿಕ್ ಸ್ಪೀಕಿಂಗ್ ಅಂಡ್ ಇನ್‍ಫ್ಲೂಯೆನ್ಸಿಂಗ್ ಮೆನ್ ಇನ್ ಬಿಸಿನೆಸ್ (1931), ಲಿಂಕನ್, ದಿ ಅನ್-ನೋನ್ (1932).

 ಈ ಗ್ರಂಥಗಳ ಯಶಸ್ಸಿನಿಂದ ಉತ್ತೇಜಿತನಾಗಿ ಡೇಲ್, ಪ್ರಸಿದ್ಧ ಪುರುಷರ ಬಗ್ಗೆ ಗ್ರಂಥವೊಂದನ್ನು ಸಿದ್ಧಪಡಿಸಲು ಸಂಶೋಧಕರನ್ನು ನೇಮಿಸಿ, ಮಹಾ ವ್ಯಕ್ತಿಗಳನ್ನು ಸ್ವತಃ ನೋಡಿ ವಿಷಯ ಸಂಗ್ರಹಿಸಲು ಪ್ರವಾಸ ಹೊರಟ. ಈ ಸಾಹಸ ಪ್ರಯತ್ನದಿಂದ ಲಿಟ್ಲ್ ನೋನ್ ಫ್ಯಾಕ್ಟ್ಸ್ ಅಬೌಟ್ ವೆಲ್‍ನೋನ್ ಪೀಪಲ್ ಎಂಬ ಗ್ರಂಥ ಪ್ರಕಟವಾಯಿತು(1934). ಈ ಗ್ರಂಥ ಇವನ ರೇಡಿಯೋ ಕಾರ್ಯಕ್ರಮಗಳಿಗೆ ಆಧಾರವಾಗಿ, ಜನಪ್ರಿಯವಾಯಿತು. ತರುವಾಯ ಈತನ ಮತ್ತೊಂದು ಗ್ರಂಥ ಫೈವ್ ಮಿನಿಟ್ ಬಯಾಗ್ರಫಿ ಹೊರಬಂತು (1937).

 ಡೇಲ್ ಕಾರ್ನೇಗಿಯ ರೇಡಿಯೋ ಕಾರ್ಯಕ್ರಮಗಳಲ್ಲಿ ಪ್ರಖ್ಯಾತವಾದವು ಇವು; ಮಾಲ್ವೆಕ್ಸ್ ಅವರ್ (1933-35); ಗೆಟಿಂಗ್ ಅಹೆಡ್ (1937-38); ಹೌ ಟು ವಿನ್ ಫ್ರೆಂಡ್ಸ್ ಅಂಡ್ ಇನ್‍ಫ್ಲೂಯೆನ್ಸ್ ದೆಂ (1939); ಹೌ ಟು ಗೆಟ್ ಅಹೆಡ್ (1941); ಮತ್ತು ಲಿಟ್ಲ್ ನೋನ್ ಫ್ಯಾಕ್ಟ್ಸ್ ಅಬೌಟ್ ವೆಲ್‍ನೋನ್ ಪೀಪಲ್ (1940-45).

 ಡೇಲ್ ಕಾರ್ನೇಗಿಯ ಗ್ರಂಥ ಹೌ ಟು ವಿನ್ ಫ್ರೆಂಡ್ಸ್ ಅಂಡ್ ಇನ್‍ಫ್ಲೂಯೆನ್ಸ್ ಪೀಪಲ್. ಕೇವಲ 6 ತಿಂಗಳಲ್ಲಿ ಅವನಿಗೆ 125,000 ಡಾಲರುಗಳ ಸಂಭಾವನೆ ಸಂಪಾದಿಸಿ ಕೊಟ್ಟಿತು. ಅದರ ಪ್ರಕಾಶಕರಾದ ಸೈಮನ್ ಅಂಡ್ ಷ್ಯುಸ್ಟರ್ ಸಂಸ್ಥೆಯ ಪ್ರಕಾರ, 1954ರ ಹೊತ್ತಿಗೆ ಈ ಗ್ರಂಥದ 1,300,000 ಪ್ರತಿಗಳು ಮಾರಾಟವಾಗಿ ಗ್ರಂಥ 35 ಭಾಷೆಗಳಿಗೆ ಭಾಷಾಂತರವಾಯಿತು. ಇವನ ಕ್ಯಾಪ್ಸೂಲ್ ಪ್ರೀಚ್‍ಮೆಂಟ್ಸ್ 71 ದೈನಂದಿನ ಪತ್ರಿಕೆಗಳಲ್ಲಿ ಪ್ರಕಟವಾದುವು. ಹೌ ಟು ಸ್ಟಾಪ್ ವರೀಯಿಂಗ್ ಅಂಡ್ ಸ್ಟಾರ್ಟ್ ಲಿವಿಂಗ್ ಎಂಬ ಇವನ ಮತ್ತೊಂದು ಗ್ರಂಥ 1948ರಲ್ಲಿ ಪ್ರಕಟವಾಯಿತು. ರೀಡರ್ಸ್ ಡೈಜೆಸ್ಟ್ ಪತ್ರಿಕೆ 1948 ಮತ್ತು 1949ರಲ್ಲಿ ಅದರ ಕೆಲವು ಆಧ್ಯಾಯಗಳ ಸಂಗ್ರಹವನ್ನು ಪ್ರಕಟಿಸಿತು.

 ಡೇಲ್ ಕಾರ್ನೇಗಿ ತನ್ನ ಶಿಕ್ಷಣ ಸಂಸ್ಥೆಯನ್ನು ಕಾರ್ನೇಗಿ ಇನ್‍ಸ್ಟಿಟ್ಯೂಟ್ ಫಾರ್ ಎಫೆಕ್ಟೀವ್ ಸ್ಪೀಕಿಂಗ್ ಅಂಡ್ ಹ್ಯೂಮನ್ ರಿಲೇಷನ್ಸ್ ಎಂದು ಪುನವ್ರ್ಯವಸ್ಥೆಗೊಳಿಸಿ ತನ್ನ ಶಿಷ್ಯವರ್ಗದಿಂದಲೇ ಶಿಕ್ಷಕರನ್ನೂ ಹಾಗೂ ಪ್ರಾದೇಶಿಕ ಮೇಲ್ವಿಚಾರರನ್ನೂ ನೇಮಿಸಿದ. ಇವನ ಸಂಸ್ಥೆ ಅಮೆರಿಕ, ಕೆನಡ, ಯೂರೋಪ್ ಮತ್ತು ದಕ್ಷಿಣ ಅಮೆರಿಕಗಳಲ್ಲಿ 300 ಶಿಕ್ಷಣ ಕೇಂದ್ರಗಳನ್ನು ಹೊಂದಿತ್ತು. ಈತ ನವೆಂಬರ್ 5, 1944ರಲ್ಲಿ ಎರಡನೆಯ ಬಾರಿ ವಿವಾಹವಾದ. ಎರಡನೆಯ ಹೆಂಡೆತಿ ಡೊರೊಥಿರೀಡರ್ ಫ್ರೈಸ್ ಪತಿಯ ಉದ್ಯಮದಲ್ಲಿ ನೆರವಾಗಿ, ಮಹಿಳಾ ವಿಭಾಗದ ಉಪಾಧ್ಯಕ್ಷಿಣಿಯಾಗಿದ್ದು, ಹೌ ಟು ಹೆಲ್ಪ್ ಯುವರ್ ಹಸ್ಬೆಂಡ್ ಟು ಗೆಟ್ ಅಹೆಡ್ ಎಂಬ ಗ್ರಂಥವನ್ನು ಪ್ರಕಟಿಸಿದಳು.           

  (ವಿ.ಜಿ.ಕೆ.)

 
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ